ಬೆಂಗಳೂರು : ನಿನ್ನೆ 11 ಆಗಸ್ಟ್‌ನ ಗುರುವಾರದಂದು ಸಂಜೆ ಅಸ್ವಸ್ಥರಾಗಿದ್ದ ಶಿವಮೊಗ್ಗ ಸುಬ್ಬಣ್ಣ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು,ಚಿಕಿತ್ಸೆಗೆ ಸ್ಪಂದಿಸದೆ ಅವರು ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆಯವರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
“ಸುಪ್ರಸಿದ್ಧ ಗಾಯಕ ಶಿವಮೊಗ್ಗ ಸುಬ್ಬಣ್ಣ ಇನ್ನಿಲ್ಲ ಎಂಬುದು ಅಸಹನೀಯ ನೋವಿನ ಸಂಗತಿ. ಅವರ ಕುಟುಂಬದವರಿಗೆ ನನ್ನ ತೀವ್ರ ಸಂತಾಪಗಳು. ಶಿಶುನಾಳ ಶರೀಫ, ಕುವೆಂಪು ಹಾಗೂ ಹಲವಾರು ಕನ್ನಡ ಕವಿಗಳ ಹಾಡುಗಳನ್ನು ಮನೆ ಮಾತಾಗಿಸಿದ ಅವರು ಸುಗಮ ಸಂಗೀತದ ದೊರೆಯಾಗಿದ್ದರು. ಇನ್ನು ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. ಗತಿಸಿದ ಅವರ ಆತ್ಮಕ್ಕೆ ಸದ್ಗತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.”
ಕನ್ನಡದ ಹಾಡುಗಳನ್ನು ಮನೆಮನಗಳಿಗೆ ತಲುಪಿಸಿದ ಅವರು ಸಂತ ಶಿಶುನಾಳ ಶರೀಷರ ತತ್ತ್ವಪದಗಳು, ಕನ್ನಡದ ಕವಿಗಳ ಭಾವಗೀತೆಗಳು,ಮತ್ತು ತಮ್ಮ ಚಿತ್ರ ಗೀತೆಗಳ ಮೂಲಕ ಕಲಾ ಸೇವೆ ನಡೆಸಿದ್ದಾರೆ. ಇವರಿಗೆ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಹೆಚ್‌ಡಿ ಕುಮಾರಸ್ವಾಮಿ,ಗೃಹ ಸಚಿವ ಆರಗ ಜ್ಞಾನೇಂದ್ರ, ವಿಶ್ವೇಶ್ವರ ಹೆಗಡೆ ಕಾಗೇರಿ ಇನ್ನಿತರ ಗಣ್ಯರು ಸಂತಾಪ ಸೂಚಿಸಿದ್ದಾರೆ.